ಈರ್ಷೆ
ಹೊಟ್ಟೆಕಿಚ್ಚು, ಅಸೂಯೆ ಎಂಬ ಹೆಸರನ್ನುಳ್ಳ ಒಂದು ಸಂಕೀರ್ಣ ಮನೋಧರ್ಮ (ಜೆಲಸಿ). ಹುಟ್ಟಿದ ಮಗುವಿನಲ್ಲಿ ಅನೇಕ ತಿಂಗಳವರೆಗೆ ಇದು ಕಾಣಿಸಿಕೊಳ್ಳುವುದಿಲ್ಲ. ಆಗಿನ ಅದರ ಭಾವಸ್ಥಿತಿ ಎಂದರೆ ಶಾರೀರಿಕ ಉದ್ರೇಕ ಮಾತ್ರ. ಕ್ರಮೇಣ ಅದರಿಂದ ಸಂಕಟ ಮತ್ತು ಆನಂದ ಎಂಬೆರಡು ಭಾವಗಳು ಸುಮಾರು ಮೂರು ತಿಂಗಳು ಹೊತ್ತಿಗೆ ಕವಲೊಡೆದುಕೊಳ್ಳುತ್ತದೆ. ಅನೇಕ ಮನೋವಿಜ್ಞಾನಿಗಳ ಸಂಶೋಧನೆಗಳ ಪ್ರಕಾರ ಈರ್ಷೆ ಮೂಲ ಸಂಕಟಭಾವದಿಂದ ಬೇರ್ಪಟ್ಟು ಸ್ವತಂತ್ರವಾಗುವ ಒಂದು ಅಸಂತುಷ್ಟಭಾವ.

ಈರ್ಷೆ ಯಾವಾಗಲೂ ಸಾಮಾಜಿಕ ಸನ್ನಿವೇಶವನ್ನು ಅವಲಂಬಿಸಿದ್ದು. ಅಂದರೆ ಹೊಟ್ಟೆಕಿಚ್ಚು ಯಾವಾಗಲೂ ಇನ್ನೊಬ್ಬರ ಬಗ್ಗೆ ಹುಟ್ಟುವ ಭಾವ. ಆದ್ದರಿಂದ ಸಾಮಾಜಿಕ ಸನ್ನಿವೇಶಗಳು ಗೊತ್ತಾಗುವವರೆಗೆ. ಅವರ ಆಸೆ, ಭದ್ರತೆಗಳಿಗೆ ಧಕ್ಕೆ ಉಂಟಾಗುವುದು ಅವರಿಗೆ ಗೊತ್ತಾಗುವವರಿಗೆ, ಮಕ್ಕಳಲ್ಲಿ ಹೊಟ್ಟೆಕಿಚ್ಚು ಕಂಡುಬರುವುದಿಲ್ಲ. 

ಹೊಟ್ಟೆಕಿಚ್ಚಿನಲ್ಲಿ ಕೋಪ, ಭಯ ಮತ್ತು ಪ್ರೀತಿಯ ಅಂಶಗಳು ಸೇರಿಕೊಂಡಿರಬಹುದು ಎಂಬುದು ಹಲವು ಮನೋವಿಜ್ಞಾನಿಗಳ ಅಭಿಮತ. ಎಲ್ಲ ವಯಸ್ಸಿನಲ್ಲೂ ಹೊಟ್ಟೆಕಿಚ್ಚಿನ ಮೂಲ ಅಭದ್ರತೆ; ತನಗೆ ಬೇಕಾದ್ದು ಸಿಗಲಾರದೆಂಬ ಅಳುಕು. ಯಾರ ಬಗ್ಗೆ ಹೊಟ್ಟೆ ಉರಿಯುತ್ತದೋ ಅವರ ಬಗ್ಗೆ ಕೋಪ, ಭಯ, ನಮ್ಮಲ್ಲಿಲ್ಲದ್ದೇನೋ ಅವರಲ್ಲಿ ಇರುವುದರಿಂದ ಒಂದು ಬಗೆಯ ಹೊಗಳುವ ಮನೋಧರ್ಮ — ಇವೆಲ್ಲ ಈ ಭಾವದಲ್ಲಿ ಬೆರೆತುಕೊಂಡಿರುತ್ತವೆ. 

ಬಾಲ್ಯದ ಪ್ರಾರಂಭದ ವರ್ಷಗಳಲ್ಲಿ ಹೊಟ್ಟೆಕಿಚ್ಚು ಹೆಚ್ಚು ಸಾಮಾನ್ಯ; ಮಕ್ಕಳು ಹೆಚ್ಚು ದೊಡ್ಡವರಾಗಿ ಇತರರೊಡನೆ ಬೆರೆಯತೊಡಗಿದಾಗ ಇದು ಸ್ವಲ್ಪ ಕಡಿಮೆ. ಕಿಶೋರಾವಸ್ಥೆಯ ಕೊನೆಯಲ್ಲಿ ಮತ್ತಿದು ಜಾಸ್ತಿಯಾಗುತ್ತದೆ. ಚಿಕ್ಕವಯಸ್ಸಿನಲ್ಲಿ ಹೊಟ್ಟೆಕಿಚ್ಚಿನ ಮೂಲಕಾರಣ ಮಗುವಿಗೆ ತಾನು ತಾಯಿಯ ಪ್ರೀತಿ ವಿಶ್ವಾಸಗಳನ್ನು ಕಳೆದುಕೊಳ್ಳುತ್ತಿದ್ದೇನೆಂಬ ಭಯ. ಅದಕ್ಕೊಂದು ತಮ್ಮನೋ ತಂಗಿಯೋ ಹುಟ್ಟಿದಾಗ ಈ ಹೊಟ್ಟೆಕಿಚ್ಚು ಚೆನ್ನಾಗಿ ವ್ಯಕ್ತವಾಗುತ್ತದೆ. ತಮ್ಮ ತಂಗಿಯರ ಆಗಮನ, ಮಗುವಿನ ದೃಷ್ಟಿಯಲ್ಲಿ, ತಾನು ಮುಖ್ಯವಾಗಿ ತಾಯಿಯ ಪ್ರೀತಿಯಿಂದ ವಂಚಿತವಾಗುವ ಸನ್ನಿವೇಶ. ಹೀಗೆ, ಹೊಟ್ಟೆಕಿಚ್ಚು ಮೂಲಭೂತವಾಗಿ ಮಗು ಪ್ರೀತಿ ವಿಶ್ವಾಸಗಳಿಂದ ವಂಚಿತವಾದಾಗ ಅಥವಾ ಹಾಗೆ ಅನ್ನಿಸಿದಾಗ ಅದು ತೋರಿಸುವ ಪ್ರತಿಕ್ರಿಯೆ. ವಾಸ್ತವವಾಗಿಯೂ ತಾಯಿಗೆ ಹೊಸದೊಂದು ಮಗು ಹುಟ್ಟಿದಾಗ ಮೊದಲಿನ ಮಗುವಿಗೆ ಹಿಂದಿನಂತೆಯೇ ಗಮನಕೊಡುವುದು ಸಾಧ್ಯವಾಗುವುದಿಲ್ಲ. ಆಕೆ ಹೊಸ ಮಗುವಿಗೆ ಹೆಚ್ಚು ಆರೈಕೆ ಮಾಡಬೇಕಾಗುತ್ತದೆ. ಇದುವರೆಗೆ ಅಮ್ಮನ ಪ್ರೀತಿಗೆ ಪೂರ್ತಿ ಪಾತ್ರವಾಗಿದ್ದ ಮಗುವಿಗೆ ಇದ್ದಕ್ಕಿದ್ದಂತೆ ತಾಯಿ ಈ ಹೊಸ ಮಗುವನ್ನು ಎತ್ತಿ ಮುದ್ದಾಡುವುದು, ಮೊಲೆಯೂಡಿಸುವುದು ಹೊಟ್ಟೆಕಿಚ್ಚು ಬರಿಸುತ್ತದೆ. ಹೊಟ್ಟೆಕಿಚ್ಚಿನ ಮೂಲ ಬಹುಶಃ ಇದಿರಬಹ್ಮದೆಂಬ ಅಭಿಪ್ರಾಯವನ್ನು ಕೆಲವು ಮನೋವಿಜ್ಞಾನಿಗಳು ವ್ಯಕ್ತಪಡಿಸುತ್ತಾರೆ.
ಹೊಟ್ಟೆಕಿಚ್ಚಿನಿಂದ ತಪ್ತವಾದ ಮಗು ಈ ಎರಡರಲ್ಲಿ ಒಂದು ಪ್ರತಿಕ್ರಿಯೆಯನ್ನು ತೋರಿಸಬಹುದು 1. ಯಾರ ಬಗ್ಗೆ ಮಗುವಿಗೆ ಹೊಟ್ಟೆಕಿಚ್ಚು ಉಂಟಾಗುತ್ತದೋ ಅವರ ಮೇಲೆ ಎಗರಿಬೀಳಬಹುದು; 2. ಇನ್ನೂ ಚಿಕ್ಕ ವಯಸ್ಸಿನ ಅವಸ್ಥೆಗೆ ಹಿನ್ನಡೆಯಬಹುದು. ಮೊದಲನೆಯ ವಿಧಾನದಿಂದ ಮಗು ತನ್ನ ಕೋಪವನ್ನು ತೀರಿಸಿಕೊಂಡರೆ ಎರಡನೆಯ ವಿಧಾನದಿಂದ ಅದು ತಾನು ಇನ್ನೂ ತುಂಬಾ ಚಿಕ್ಕವನೆಂದು ತೋರಿಸುವುದರ ಮೂಲಕ ತಾಯ್ತಂದೆಯರ ಗಮನವನ್ನು ಸೆಳೆಯಬಹುದು. ಈ ಎರಡನೆಯ ಬಗೆಯ ಪ್ರತಿಕ್ರಿಯೆಯನ್ನು ತೋರಿಸುವ ಮಗು ಸಾಕಷ್ಟು ದೊಡ್ಡದಾಗಿದ್ದರೂ ಮುದ್ದು ಭಾಷೆಯಲ್ಲಿ ಮಾತನಾಡಲು, ಹಾಸಿಗೆಯಲ್ಲಿ ಮೂತ್ರವಿಸರ್ಜನೆ ಮಾಡಲು, ಹಟಮಾಡಲು ಮೊದಲು ಮಾಡಬಹುದು.

ದೊಡ್ಡವರಲ್ಲಿ ಹೊಟ್ಟೆಕಿಚ್ಚಿನ ಮೂಲಕಾರಣ ಬೇರೆಯವರ ಶ್ರೀಮಂತಿಕೆ, ಘನತೆ, ಹಿರಿಮೆಗಳು ಮತ್ತು ಇತರ ಶಕ್ತಿಸಾಮಥ್ರ್ಯಗಳು. ಸೊಸೆಯ ಸುಖದ ನಲಿದಾಟಗಳನ್ನು ಕಂಡು ಅತ್ತೆಗೆ, ಅತ್ತೆಯ ಅಧಿಕಾರವನ್ನು ಕಂಡು ಸೊಸೆಗೆ, ಓರಗಿತ್ತಿಯರ ಉತ್ಕರ್ಷವನ್ನು ಕಂಡು ಹೆಂಗಸಿಗೆ, ನೆಂಟರಿಷ್ಟರ ಅಭಿವೃದ್ಧಿಯನ್ನು ಕಂಡು ಗಂಡಸಿಗೆ ಈರ್ಷೆಯುಂಟಾಗುವುದು ಸಾಮಾನ್ಯ. ಈರ್ಷೆಯಿಂದ ಪ್ರತೀಕಾರ ಬುದ್ಧಿ ಬೆಳೆಯುತ್ತದೆ. ಅವರ ಸುಖ ತನಗೆ ಸಿಕ್ಕರಂತೂ ಪರಮಸಂತೋಷ. ಅದಿಲ್ಲದಲ್ಲಿ ಅವರ ಸುಖ ಕಡಿಮೆಯಾದರೆ ಅಷ್ಟೇ ಸಾಕು ಎಂಬ ಭಾವ ಈರ್ಷಾವಂತರಲ್ಲಿ ಬೆಳೆಯುತ್ತದೆ. ಸಾಹಿತ್ಯದ ಉತ್ಕøಷ್ಟ ಮಾದರಿಗಳಿಗೆಲ್ಲ ಈ ಭಾವನೆ ಒಂದಲ್ಲ ಒಂದು ರೀತಿಯಲ್ಲಿ ಮೂಲವಸ್ತುವನ್ನೊದಗಿಸಿದೆ. ಎಲ್ಲ ವಯಸ್ಸಿನಲ್ಲೂ ಹೊಟ್ಟೆಕಿಚ್ಚು ಅನಪೇಕ್ಷಣೀಯ ಭಾವ. ಬಾಲ್ಯದಲ್ಲಿ ಅತಿಯಾದ ಹೊಟ್ಟೆಕಿಚ್ಚನ್ನು ಅನುಭವಿಸುವ ಮಕ್ಕಳ ಮಾನಸಿಕ ಬೆಳವಣಿಗೆ ಕುಂಠಿತವಾಗಬಹುದು. ದೊಡ್ಡವರಲ್ಲಿ ಇದು ಮಾನಸಿಕ ಅನಾರೋಗ್ಯದ, ಅಂಜಿಕೆಯ, ಅಪ್ರಬುದ್ಧತೆಯ ಸೂಚನೆಯಾಗಬಹುದು.
(ಎಂ.ಎನ್.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ